ನಾಗಾರ್ಜುನ ಕೊಂಡ -
ಆಂಧ್ರ ಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ಪಲ್ನಾಡು ತಾಲ್ಲೂಕಿನಲ್ಲಿ ಉ.ಅ. 16 31 ಮತ್ತು ಪೂ.ರೇ. 79 14 ಮೇಲೆ ಇರುವ ಒಂದು ಪ್ರಕೃತಿರಮ್ಯ ಕಣಿವೆ. ಕ್ರಿಸ್ತಶಕದ ಆರಂಭಕಾಲದಲ್ಲಿ ಜೀವಿಸಿದ್ದ ವಿಶ್ವ ಪ್ರಖ್ಯಾತ ಬೌದ್ಧ ವಿದ್ವಾಂಸ, ಮಾಧ್ಯಮಿಕ ಶಾಖೆಯ ಪ್ರವರ್ತಕ ನಾಗಾರ್ಜುನಾಚಾರ್ಯ ಅಲ್ಲಿ ವಾಸಮಾಡಿ ಸಮಾಧಿ ಹೊಂದಿದುದರಿಂದ ಈ ಪ್ರದೇಶಕ್ಕೆ ನಾಗಾರ್ಜುನ ಕೊಂಡ (ಬೆಟ್ಟ) ಎಂದು ಹೆಸರು ಬಂದಿದೆ. ಸುಮಾರು 20.5 ಚ.ಕಿ.ಮೀ. ವಿಸ್ತೀರ್ಣದ ಈ ಕಣಿವೆಯ ಉತ್ತರ, ಪೂರ್ವ ಮತ್ತು ದಕ್ಷಿಣಗಳಲ್ಲಿ ಎತ್ತರವಾದ ಪರ್ವತಗಳೂ ಪಶ್ಚಿಮ ಮತ್ತು ವಾಯವ್ಯದಿಕ್ಕುಗಳಲ್ಲಿ ವೇಗವಾಗಿ ಹರಿಯುವ ಕೃಷ್ಣಾನದಿಯೂ ಇದೆ. ಇಕ್ಷ್ವಾಕು ದೊರೆಗಳ ಕಾಲದ (ಕ್ರಿ.ಶ. 3-4ನೆಯ ಶತಮಾನಗಳು) ನೂರಾರು ಅವಶೇಷಗಳು ಈ ಕಣಿವೆಯಲ್ಲಿ ಅವರ ರಾಜಧಾನಿಯಾದ ವಿಜಯಪುರಿಯ ನಿವೇಶನದಲ್ಲಿ ದೊರಕಿರುವುದರಿಂದ ಈ ಕಣಿವೆ ಐತಿಹಾಸಿಕ ಪ್ರಾಮುಖ್ಯ ಪಡೆದಿದೆ. ಅಲ್ಲದೆ ಅಸಂಖ್ಯಾತ ಬೌದ್ಧ ವಾಸ್ತು ನಿರ್ಮಾಣಗಳ ಅವಶೇಷಗಳನ್ನೂ ಇಲ್ಲಿ ಕಾಣಬಹುದು. (ಬಿ.ಸಿ.ಪಿ.)

ಪ್ರಾಗಿತಿಹಾಸ : ನಾಗಾರ್ಜುನ ಕೊಂಡದ ಐತಿಹಾಸಿಕ ಮಹತ್ತ್ವ ಇಕ್ಷ್ವಾಕು ದೊರೆಗಳ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಅತ್ಯಂತ ಪ್ರಾಚೀನ ಕಾಲದ ಶಿಲಾಯುಧಗಳನ್ನು ಬಳಸುತ್ತಿದ್ದ ಮಾನವರು ಈ ಪ್ರದೇಶದಲ್ಲಿ ನೆಲಸಿದ್ದುದರ ಕುರುಹುಗಳು ಇಲ್ಲಿ ಕಂಡುಬಂದಿವೆ. ಇಲ್ಲಿಯ ಆರು ಪ್ರದೇಶಗಳಲ್ಲಿ ಆದಿಪುರಾತನ ಶಿಲಾಯುಗದ ಆಯುಧೋಪಕರಣಗಳು ಕಂಡುಬಂದಿವೆ. ಅವುಗಳಲ್ಲಿ ಕೈಗೊಡಲಿ, ಕ್ಲೀವರ್ ಕೊಡಲಿ, ಉಂಡೆಕಲ್ಲಿನ ಆಯುಧಗಳು ಮತ್ತು ಚಕ್ಕೆಕಲ್ಲಿನ ಆಯುಧಗಳು ಪ್ರಮುಖವಾದವು. ಕೈಗೊಡಲಿ ಸಂಸ್ಕøತಿಯಲ್ಲಿ ಅಬ್ಬೆವಿಲಿಯನ್ ಮತ್ತು ಅಷ್ಯೂಲಿಯನ್ ಹಂತದ ಆಯುಧಗಳನ್ನೂ ಚಕ್ಕೆಗಳನ್ನೂ ತೆಗೆಯಲು ಕ್ಲಾಕ್ಟೋನಿಯನ್ ಮತ್ತು ಲೆವಾಲ್ವಾ ತಂತ್ರಗಳನ್ನು ಬಳಸಲಾಗಿದೆ. ಇಲ್ಲಿ ದೊರೆತಿರುವ ಮಾಹಿತಿಗಳಿಂದ ಹೇಳುವುದಾದರೆ ಆಯುಧ ತಯಾರಿಕೆಯ ತಂತ್ರಗಳಲ್ಲಿ ನಿರ್ದಿಷ್ಟ ವಿಕಾಸವೇನೂ ಕಂಡುಬರುವುದಿಲ್ಲ. ಮಧ್ಯ ಪುರಾತನ ಶಿಲಾಯುಗದ ಚಕ್ಕೆಕಲ್ಲಿನ ಆಯುಧಗಳು ಒಂದೆರಡು ಪ್ರದೇಶಗಳಲ್ಲಿ ಸಿಕ್ಕಿವೆ. ಹೆರೆಯುವ ಕೊರೆಯುವ ಆಯುಧಗಳು, ಮೊನೆಯಾದ ಚಕ್ಕೆಗಳು ಮೊದಲಾದವು ಈ ಹಂತದ ಪ್ರಮುಖ ಆಯುಧರೀತಿಗಳು. ಇವನ್ನು ಲೆವಾಲ್ವಾಸಿಯನ್ ತಂತ್ರದಿಂದ ತಯಾರಿಸಿದ ಚಕ್ಕೆಕಲ್ಲುಗಳಿಂದ ಮಾಡಲಾಗಿದೆ. ಅಂತ್ಯಪುರಾತನ ಶಿಲಾಯುಗದ ಸಮಾನಾಂತರ ತುದಿಗಳುಳ್ಳ ದೀರ್ಘ ತೆಳುಚಕ್ಕೆಗಳ ಮೇಲೆ ತಯಾರಿಸಿದ ಆಯುಧಗಳು ಸಹ ಕಂಡುಬರುತ್ತವೆ. ಈ ಆಯುಧ ಸಾಮಗ್ರಿಗಳ ತಯಾರಿಕೆ ಮತ್ತು ಆ ಕಾಲದ ಜನ ಜೀವನದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

ಅನಂತರಕಾಲದ ಸೂಕ್ಷ್ಮಶಿಲಾಯುಧಗಳು ಆ ಮೊದಲಿನ ಅಂತ್ಯಪುರಾತನ ಶಿಲಾಯುಗದ ಆಯುಧಗಳಿಂದ ಸ್ಪೂರ್ತಿ ಪಡೆದಂತೆ ಕಾಣುತ್ತದೆ. ಕೆಲವೆಡೆಗಳಲ್ಲಿ ಆವಶ್ಯಕವಾದ ಶಿಲಾರೀತಿಗಳು ಮತ್ತು ನೈಸರ್ಗಿಕ ಪರಿಸರಗಳಿರುವುದರಿಂದ ಆ ಸ್ಥಳಗಳಲ್ಲಿ ಈ ರೀತಿಯ ಆಯುಧಗಳು ಅಧಿಕಸಂಖ್ಯೆಯಲ್ಲಿ ಸಿಕ್ಕಿವೆ. ಅನಂತರಕಾಲದ ನವಶಿಲಾಯುಗ ಸಂಸ್ಕøತಿಯ ಅವಶೇಷಗಳು ನಾಗಾರ್ಜುನ ಕೊಂಡದಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡುಬಂದಿವೆ. ಆದರೆ ಈವರೆಗೆ ಪರಿಶೋಧಿಸಿ ಉತ್ಖನನ ಮಾಡಿರುವ ಪ್ರದೇಶಗಳು ಸೀಮಿತವಾಗಿವೆ. ನಯಗೊಳಿಸಿದ ಕೊಡಲಿಗಳು, ಉಳಿಗಳು, ಚೂಪಾದ ಮೊನೆಯುಳ್ಳ, ಆಯುಧದ ತಯಾರಿಕೆಗೆ ಬಳಸುವ, ಫ್ಯಾಬ್ರಿಕೇಟರ್ ಮುಂತಾದ ಕಲ್ಲಿನ ಆಯುಧಗಳು, ಮೆರಗುಗೊಳಿಸಿದ ಬೂದುಬಣ್ಣದ ಮೃಣ್ಪಾತ್ರೆಗಳು, ಮಕ್ಕಳ ಶವಗಳನ್ನು ಹೂತಿಟ್ಟ ಶವಜಾಡಿಗಳು ಇವು ಆ ಸಂಸ್ಕøತಿಯ ವಿಶಿಷ್ಟ ಲಕ್ಷಣಗಳು. ನೆಲೆನಿಂತ ಗ್ರಾಮೀಣ ಜೀವನ, ಪಶುಸಂಗೋಪನ, ವ್ಯವಸಾಯವೃತ್ತಿಗಳು ಆ ಕಾಲದ ಜನರಲ್ಲಿ ರೂಢಿಯಲ್ಲಿದ್ದುದು ಸ್ಪಷ್ಟವಾಗಿವೆ. ನವಶಿಲಾಯುಗ ವಸತಿಯಿಂದ ಅನತಿದೂರದಲ್ಲಿರುವ ಶ್ಮಶಾನ ಆ ಜನರಿಗೆ ಸೇರಿದ್ದುದಾಗಿ ತಿಳಿದು ಬಂದಿದೆ.

ಕಬ್ಬಿಣಯುಗದ ಸಂಸ್ಕøತಿಯ ಅವಶೇಷಗಳಾದ ಬೃಹತ್ ಶಿಲಾಸಮಾಧಿಗಳು ಇಲ್ಲಿ ಹೇರಳವಾಗಿವೆ. ಈವರೆಗೆ ಉತ್ಖನನ ಮಾಡಿರುವ ಸಮಾಧಿಗಳನ್ನು ಶಿಲಾವರ್ತುಲ, ಶಿಲಾತೊಟ್ಟಿ, ಜಲ್ಲಿಕಲ್ಲು ದಿಬ್ಬಗಳ ವರ್ತುಲ ಮತ್ತು ಶವಜಾಡಿಗಳ ಗುಂಡಿಗಳೆಂದು ಹಲವು ಪ್ರಕಾರಗಳಾಗಿ ವಿಭಾಗಿಸಬಹುದು. ಕಬ್ಬಿಣದ ಆಯುಧೋಪಕರಣಗಳು ಅಧಿಕಸಂಖ್ಯೆಯಲ್ಲೂ ತಾಮ್ರದ ವಸ್ತುಗಳು ವಿರಳವಾಗಿಯೂ ಬಳಕೆಯಲ್ಲಿದ್ದವು. ಅವರು ಸುಧಾರಿತ ವ್ಯವಸಾಯ, ಪಶುಪಾಲನೆ ಮತ್ತು ಕೆಲವು ಗೃಹಕೈಗಾರಿಕೆಗಳನ್ನು ರೂಢಿಸಿಕೊಂಡಿದ್ದರು. ನಿತ್ಯಬಳಕೆಗೆ ಕಪ್ಪು ಮತ್ತು ಕೆಂಪು ಬಣ್ಣಗಳ, ಹೊಳೆಯುವ ಕಪ್ಪುಬಣ್ಣದ ಮತ್ತು ಒರಟಾದ ಕೆಂಪು ಬಣ್ಣದ ಮಡಕೆಗಳನ್ನೂ ತಾಮ್ರ ಮತ್ತು ಕಬ್ಬಿಣದ ಉಪಕರಣಗಳನ್ನೂ ಬಳಸುತ್ತಿದ್ದರು. ದೇಹಾಲಂಕಾರಕ್ಕೆ ಉತ್ತಮ ಶಿಲೆಗಳ, ಶಂಕುಗಳ, ಗಾಜಿನ ಮತ್ತು ಸುಟ್ಟಮಣ್ಣಿನ ಮಣಿ, ಬಳೆ, ಉಂಗುರ ಮುಂತಾದ ಆಭರಣಗಳನ್ನು ಬಳಸುತ್ತಿದ್ದರು. ಕಾಲಕ್ರಮದಲ್ಲಿ ವಿಕಾಸಗೊಂಡ ಈ ಸಂಸ್ಕøತಿ ಇತಿಹಾಸಯುಗದ ನಾಂದಿ ಹಾಡಿತು.

ಇತಿಹಾಸ: ನಾಗಾರ್ಜುನ ಕೊಂಡ ಪ್ರದೇಶವನ್ನು ಮೊದಲಿಗೆ ಮಗಧ ಸಾಮ್ರಾಜ್ಯದ ನಂದ ಚಕ್ರವರ್ತಿಗಳು ವಶಪಡಿಸಿಕೊಂಡಂತೆ ತಿಳಿದುಬರುತ್ತದೆ. ಆ ತರುವಾಯ ಇದು ಮೌರ್ಯ ಸಾಮ್ರಾಜ್ಯದಲ್ಲಿ ಸೇರಿಹೋಯಿತು. ಮೌರ್ಯರ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶದಲ್ಲಿ ಆಂಧ್ರ, ಪುಳಿಂದ ಮುಂತಾದ ಹಲವಾರು ಪಂಗಡಗಳ ಜನರು ವಾಸಮಾಡುತ್ತಿದ್ದರು. ಕ್ರಿ.ಪೂ. 232ರ ಸುಮಾರಿಗೆ, ಅಶೋಕನ ಮರಣಾನಂತರ, ಆವರೆಗೆ ಮೌರ್ಯರ ಸಾಮಂತರಾಗಿದ್ದ ಶಾತವಾಹನರು ಮಧ್ಯಭಾರತದಲ್ಲಿ ಅಧಿಕಾರಕ್ಕೆ ಬಂದರು. ನಾಗಾರ್ಜುನ ಕೊಂಡ ಪ್ರದೇಶ ಶಾತವಾಹನರ ಆಳ್ವಿಕೆಯ ಪ್ರಾರಂಭದ ಕಾಲದಿಂದ ಅವರ ವಶದಲ್ಲಿತ್ತೋ ಇಲ್ಲವೋ ನಿಶ್ಚಿತವಾಗಿ ಹೇಳಲಾಗದಿದ್ದರೂ ಕ್ರಿ.ಶ. 1ನೆಯ ಶತಮಾನದಲ್ಲಿ ಗೌತಮೀ ಪುತ್ರ ಶಾತಕರ್ಣಿಯ ಕಾಲದಲ್ಲಿ ನಿಶ್ಚಿತವಾಗಿ ಅವರ ವಶದಲ್ಲಿತ್ತು. ಶಾತವಾಹನ ದೊರೆಗಳ ಬೌದ್ಧ ಧರ್ಮಕ್ಕೆ ಆಶ್ರಯ ನೀಡಿ ಈ ಪರಿಸರದಲ್ಲಿ ಹಲವಾರು ಬೌದ್ಧ ಸ್ತೂಪಗಳು, ಚೈತ್ಯಾಲಯಗಳು ಮತ್ತು ಸಂಘಾರಾಮಗಳನ್ನು ಕಟ್ಟಿಸಿದರು. ಅವರ ರಾಜಧಾನಿ ಧಾನ್ಯಕಟಕದಲ್ಲಿಯ (ಈಗಿನ ಅಮರಾವತಿ) ನಿರ್ಮಾಣಗಳು ಅವುಗಳಲ್ಲಿ ಪ್ರಮುಖವಾದವು. ಇಕ್ಷ್ವಾಕು ವಂಶದವರು ಶಾತವಾಹನರ ಸಾಮಂತರಾಗಿ (ಮಹಾತಳವಾರ) ಈ ಪ್ರದೇಶವನ್ನು ಆಳುತ್ತಿದ್ದರು. ಅವರ ರಾಜಧಾನಿ ವಿಜಯಪುರಿ ನಾಗಾರ್ಜುನ ಕೊಂಡ ಕಣಿವೆಯಲ್ಲಿದೆ. ಪಶ್ಚಿಮ ಭಾರತದಲ್ಲಿ ಪ್ರಬಲರಾಗಿದ್ದ ಕ್ಷತ್ರಪರ ಪ್ರಭಾವಕ್ಕೆ ಸಿಲುಕಿ ಶಾತವಾಹನರು 218ರ ವೇಳೆಗೆ ಅವನತಿ ಹೊಂದಿದಾಗ ಇಕ್ಷ್ವಾಕು ದೊರೆಗಳು ಈ ಪ್ರದೇಶದಲ್ಲಿ ಸ್ವತಂತ್ರರಾದರು. ನಾಗಾರ್ಜುನ ಕೊಂಡ, ಜಗ್ಗಯ್ಯಪೇಟ, ರಾಮರೆಡ್ಡಿಪಲ್ಲಿ, ಗೋಲಿ, ಗುರಜಾóಲ ಮುಂತಾದ ಸ್ಥಳಗಳಲ್ಲಿ ಸಿಕ್ಕಿರುವ ಈ ಕಾಲದ ಶಾಸನಗಳು ಅವರ ವಂಶಾವಳಿ ಮತ್ತು ಇತಿಹಾಸದ ಬಗ್ಗೆ ಕೆಲವು ಮಾಹಿತಿಗಳನ್ನೊದಗಿಸುತ್ತವೆ. ಅವುಗಳಿಂದ ನಾಲ್ಕು ಅರಸರ ಹೆಸರುಗಳು ಮತ್ತು ಅವರ ಸಾಧನೆಗಳ ಬಗ್ಗೆ ಅನೇಕ ಮಾಹಿತಿಗಳು ದೊರಕಿವೆ. ಅವರಲ್ಲಿ ಮೊದಲಿಗನಾದ ವಾಸಿಷ್ಠೀಪುತ್ರ ಶ್ರೀಶಾಂತಮೂಲ ಶಾತವಾಹನರ ಕೊನೆಯ ದೊರೆ 4ನೆಯ ಪುಳುಮಾವಿಯನ್ನು ಸೋಲಿಸಿ ರಾಜಧಾನಿ ಅಮರಾವತಿಯನ್ನು ವಶಪಡಿಸಿಕೊಂಡು ಸ್ವತಂತ್ರನಾದ. ತನ್ನ ಅಧಿಕಾರದ ದ್ಯೋತಕವಾಗಿ ಅವನು ಅಗ್ನಿಹೋತ್ರ, ಅಗ್ನಿಷ್ಟೋಮ, ವಾಜಪೇಯ ಮತ್ತು ಅಶ್ವಮೇಧ ಯಾಗಗಳನ್ನು ಮಾಡಿದುದಾಗಿ ಶಾಸನಗಳು ತಿಳಿಸಿವೆ. ಅವನು ಮಹಾಸೇನ ಅಥವಾ ಕಾರ್ತಿಕೇಯ ಸ್ವಾಮಿಯ ಭಕ್ತ; ವಿಶೇಷ ದಾನ ಧರ್ಮಗಳನ್ನು ಮಾಡಿದ. ಅವನ ಅನಂತರ ಅನುಕ್ರಮವಾಗಿ ಮಠಾರೀಪುತ್ರ ಶ್ರೀ ವೀರಪುರುಷದತ್ತ, ವಾಸಿಷ್ಠೀಪುತ್ರ ಶ್ರೀಬಹುವಲ ಶಾಂತಮೂಲ ಮತ್ತು ಶ್ರೀರುದ್ರ ಪುರುಷದತ್ತ ಅಧಿಕಾರಕ್ಕೆ ಬಂದುದಾಗಿ ತಿಳಿದುಬರುತ್ತದೆ. ಅವರು ವೈದಿಕ ಬ್ರಾಹ್ಮಣ ಸಂಪ್ರದಾಯಸ್ಥರು. ಶ್ರೀವೀರಪುರುಷದತ್ತ ಸುವ್ಯವಸ್ಥಿತ ರಾಜ್ಯಾಡಳಿತವನ್ನು ಪಡೆದ ಅನಂತರ ತನ್ನ ಭುಜಬಲದಿಂದಲೂ ವೈವಾಹಿಕ ಸಂಬಂಧಗಳ ಮೂಲಕವೂ ಅಧಿಕಾರವನ್ನು ವೃದ್ಧಿಗೊಳಿಸಿಕೊಂಡ. ಉಜ್ಜಯಿನಿಯಲ್ಲಿ ಆಳುತ್ತಿದ್ದ ಕ್ಷತ್ರಪ ದೊರೆಯ ಪುತ್ರಿ ಮಹಾದೇವಿ ರುದ್ರಧರ ಭಟಾರಿಕೆಯನ್ನು ವಿವಾಹ ಮಾಡಿಕೊಂಡಿದ್ದ. ತನ್ನ ಪುತ್ರಿ ಕೊಡಬಲಿಶ್ರೀಯನ್ನು ಬನವಾಸಿಯ (ಚುಟುವಂಶದ ?) ಅರಸನಿಗೆ ಮದುವೆ ಮಾಡಿಕೊಟ್ಟಿದ್ದ. ಅವನ ಸೋದರತ್ತೆ (ತಂದೆಯ ತಂಗಿ) ಶಾಂತಿಶ್ರೀ ಪೂಕಿಯ ಮನೆತನದ ಮಹಾಸೇನಾಪತಿ ಮಹಾತಳವಾರ ವಾಸಿಷ್ಟೀಪುತ್ರ ಮಹಾಸ್ಕಂದಶ್ರೀಯನ್ನು ವಿವಾಹವಾಗಿದ್ದಳು. ಅವನ ಸೋದರಿ ಮಹಾಮಹಾತಳವಾರಿ ಅಡವಿ ಶಾಂತಿಶ್ರೀ ಧನುಕ ವಂಶದ ಮಹಾತಳವಾರ ಮಹಾಸೇನಾಪತಿ ಮಹಾದಂಡನಾಯಕ ಸ್ಕಂದವಿಶಾಖಂಣಕನನ್ನು ವರಿಸಿದ್ದಳು. ಅವನ ಐವರ ರಾಣಿಯರಲ್ಲಿ ಪ್ರಮುಖಳಾದ ಮಹಾದೇವಿ ಭಟ್ಟಿದೇವಿಯ ಪುತ್ರ ವಾಸಿಷ್ಠೀಪುತ್ರ ಶ್ರೀಬಹುವಲಶಾಂತಮೂಲ ಮುಂದಿನ ರಾಜ್ಯಧಿಕಾರಿಯಾದ. ವೀರಪುರುಷದತ್ತನ ಇತರ ರಾಣಿಯರೆಂದರೆ ಕ್ಷತ್ರಪ ರಾಜಪುತ್ರಿ ರುದ್ರಧರ ಭಟಾರಿಕಾ, ಅವನ ಸೋದರತ್ತೆಯರ ಮಕ್ಕಳಾದ ಷಷ್ಠಿಶ್ರೀ, ಬಪಿಶ್ರಿಣಿಕಾ ಮತ್ತು ಶಾಂತಿಶ್ರೀಯ ಹೆಸರು ತಿಳಿಯದ ಮಗಳೊಬ್ಬಳು. ಈ ರಾಣಿಯರು ಬೌದ್ಧಧರ್ಮಾನುಯಾಯಿಗಳಾಗಿದ್ದು ಹಲವಾರು ಸಂಘರಾಮ, ಚೈತ್ಯಾಗಾರ ಮತ್ತು ಸ್ತೂಪಗಳನ್ನು ನಿರ್ಮಿಸಿ ಅಮರರಾಗಿದ್ದಾರೆ.

ಮಹಾರಾಜ ವಾಸಿಷ್ಠೀಪುತ್ರ ಬಹುವಲಶಾಂತಮೂಲನ ಕಾಲದಲ್ಲಿ ಸಹ ರಾಜ್ಯಶ್ರೀ ವೃದ್ಧಿದಿಶೆಯಲ್ಲಿದ್ದರೂ ಆ ವಂಶದ ಕೊನೆಯ ದೊರೆ ಶ್ರೀರುದ್ರಪುರುಷ ದತ್ತನ ಕಾಲದಲ್ಲಿ ಬೃಹತ್ಫಲಾಯನ ಮತ್ತು ಪಲ್ಲವ ದೊರೆಗಳ ಪ್ರಾಬಲ್ಯದಿಂದ ಜರ್ಜರಿತಗೊಂಡ ಇಕ್ಷ್ವಾಕು ವಂಶ ರಾಜ್ಯಶ್ರೀ ಇಳಿಮುಖವಾಯಿತು. ರಾಜಧಾನಿಯನ್ನು ವಿಜಯಪುರಿಯಿಂದ ಬೆಟ್ಟಗುಡ್ಡಗಳ ಮಧ್ಯದಲ್ಲಿ ನಿರ್ಮಿಸಲಾದ ಹಾಲಪುರಕ್ಕೆ ವರ್ಗಾಯಿಸಲಾಯಿತು. ಬೌದ್ಧಮತವೂ ಅವನತಿ ಹೊಂದಿತು. ಈ ಘಟನೆಗಳ ಅನಂತರ ನಾಗಾರ್ಜುನ ಕೊಂಡ ಕಣಿವೆಯ ರಾಜಕೀಯ ಮಹತ್ತ್ವ ಕ್ಷೀಣಿಸಿತು. ಆ ಸಮಯದಲ್ಲಿ ಪ್ರಾಯಶಃ ಪಲ್ಲವರು ಈ ಪ್ರದೇಶವನ್ನು ಗೆದ್ದುಕೊಂಡು ಇಕ್ಷ್ವಾಕುವಂಶವನ್ನು ಮೂಲೆಗುಂಪಾಗಿಸಿದರು. ಮತ್ತೆ ಚಾಳುಕ್ಯರ ಕಾಲದಲ್ಲಿ (7-12ನೆಯ ಶತಮಾನಗಳು) ನಾಗಾರ್ಜುನ ಕೊಂಡ ಕಣಿವೆಗೆ ಸ್ವಲ್ಪ ಮಹತ್ತ್ವ ದೊರಕಿತು. ಆ ಕಾಲದ ಕೆಲವು ಶಾಸನಗಳೂ ಕಟ್ಟಡಗಳ ಅವಶೇಷಗಳು ಸಿಕ್ಕಿವೆ. ಮತ್ತೆ ವಾರಂಗಲ್ಲಿನ ಕಾಕತೀಯ ದೊರೆಗಳ ಕಾಲದಲ್ಲಿ ಈ ಕಣಿವೆಗೆ ಸ್ವಲ್ಪ ಗಮನ ನೀಡಲಾಯಿತು. 15-16ನೆಯ ಶತಮಾನದಲ್ಲಿ ಕೊಂಡವೀಡುರೆಡ್ಡಿ ರಾಜ್ಯದ ಭಾಗವಾಗಿದ್ದಾಗ ಅದರ ಗಡಿಪ್ರದೇಶವಾದ ಇಲ್ಲಿ ಕೋಟೆಕೊತ್ತಲಗಳನ್ನು ನಿರ್ಮಿಸಲಾಗಿತ್ತು. ಗಜಪತಿ ದೊರೆಗಳ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆ ಕೋಟೆಯನ್ನು ವಿಜಯನಗರ ಸಾಮ್ರಾಟ ಶ್ರೀಕೃಷ್ಣದೇವರಾಯ 1515ರಲ್ಲಿ ಧೂಳೀಪಟ ಮಾಡಿದ. ತರುವಾಯ ಇದು ಕುತುಬ್‍ಶಾಹಿ ಸುಲ್ತಾನರ ವಶವಾಯಿತು. ಅರ್ವಾಚೀನ ಕಾಲದಲ್ಲಿ ಕಡಪ ಜಿಲ್ಲೆಯಲ್ಲಿರುವ ಪುಷ್ಪಗಿರಿಮಠದ ಬ್ರಾಹ್ಮಣರಿಗೆ ಇದನ್ನು ಅಗ್ರಹಾರವಾಗಿ ಕೊಡಲಾಯಿತು. ನಾಗಾರ್ಜುನ ಸಾಗರದ ನಿರ್ಮಾಣಕಾರ್ಯ ಪ್ರಾರಂಭವಾಗುವವರೆಗೂ ಇದು ಅವರ ವಶದಲ್ಲಿ ಉಳಿದಿತ್ತು.

ಧಾರ್ಮಿಕ ಪ್ರಭಾವಗಳು : ನಾಗಾರ್ಜುನ ಕೊಂಡ ಇಕ್ಷ್ವಾಕು ವಂಶದವರ ಆಳ್ವಿಕೆಯಲ್ಲಿದ್ದಾಗ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಬೌದ್ಧಧರ್ಮದ ಉಚ್ಛ್ರಾಯ ಸ್ಥಿತಿ. ಆ ದೊರೆಗಳು ವೈದಿಕ ಬ್ರಾಹ್ಮಣ ಧರ್ಮಾನುಯಾಯಿಗಳು; ಶೈವ ಧರ್ಮದ ಉಪಾಸಕರು. ಅವರು ವೈಷ್ಣವ ಧರ್ಮಕ್ಕೂ ಪ್ರೋತ್ಸಾಹ ನೀಡಿದ್ದರು. ಆದರೆ ಆ ವಂಶದ ಸ್ತ್ರೀ ಜನರು ಬೌದ್ಧಧರ್ಮವನ್ನು ಸ್ವೀಕರಿಸಿ, ಈ ಕಣಿವೆಯಲ್ಲಿರುವ ಅಸಂಖ್ಯಾತ ಬೌದ್ಧಸ್ತೂಪ, ಚೈತ್ಯಾಗಾರ, ವಿಹಾರಗಳ ನಿರ್ಮಾಣಕ್ಕೆ ಕಾರಣರಾದರು. ಸ್ವಲ್ಪಮಟ್ಟಿಗೆ ವಿಜಯಪುರಿಯ ಶ್ರೀಮಂತರೂ ವಣಿಕರೂ ಬೌದ್ಧಧರ್ಮಕ್ಕೆ ಆಶ್ರಯ ನೀಡಿದರು.

ರಾಣೀವಾಸದ ಬೌದ್ಧಮತ ಪ್ರೋತ್ಸಾಹಕರಲ್ಲಿ ಅತಿಪ್ರಮುಖಳೂ ಮಹಾತಳವಾರಿ ಶಾಂತಿಶ್ರೀ; ವಾಸಿಷ್ಠೀಪುತ್ರ ಶ್ರೀಶಾಂತಮೂಲನ ಸೋದರಿ. ಮಹಾದಾನಪತಿನಿ ಎಂದು ಬಿರುದಾಂಕಿತಳಾದ ಆಕೆ ಬೌದ್ಧಬಿಕ್ಷುಗಳ ಸಹಾಯಾರ್ಥವಾಗಿ ಅಪರಿಮಿತ ದಾನದತ್ತಿಗಳನ್ನು ನೀಡಿದ್ದಳು; ಮುಖ್ಯವಾಗಿ ನಾಗಾರ್ಜುನಕೊಂಡದಲ್ಲಿರುವ ಮಹಾಚೈತ್ಯವನ್ನು ಆಕೆ ಪುನರುಜ್ಜೀವನಗೊಳಿಸಿದಳು. ಅದರ ನಾಲ್ಕೂ ಪಕ್ಕಗಳಲ್ಲಿ ಐದೈದು ಆಯ ಸ್ತಂಭಗಳನ್ನು ಸ್ಥಾಪಿಸಿ ಅವನ್ನು ಅಲಂಕಾರ ಮಾಡಿಸಿದಳು. ಇಕ್ಷ್ವಾಕು ದೊರೆಗಳ ಇತಿಹಾಸದ ಪುನಾರಚನೆಗೆ ಸಾಧಕವಾದ ಅನೇಕ ಶಾಸನಗಳನ್ನು ಆ ಕಂಬಗಳ ಮೇಲೆ ಕಡೆಯಲಾಗಿದೆ. ಅಪರಮಹಾವಿನಸೆಲಿಯ ಪಂಥದ ಬೌದ್ಧಭಿಕ್ಷುಗಳಾಗಿ ಆ ಚೈತ್ಯವನ್ನೂ ಅದರ ಬಳಿ ಗಜಪೃಷ್ಠಾಕೃತಿಯ ಚೈತ್ಯಾಗಾರವೊಂದನ್ನೂ ಅದರ ಸುತ್ತಲ ಪ್ರಾಂಗಣ ಮತ್ತು ವಿಹಾರಗಳನ್ನೂ ಕಟ್ಟಿಸಿದಳು. ಮಹಾದೇವಿ ರುದ್ರಧರ ಭಟಾರಿಕಾ ಮಹಾಚೈತ್ಯಕ್ಕೆ ಹೊಸ ಭಾಗಗಳನ್ನು ಕಟ್ಟಿಸಿ, ಅನೇಕ ದಾನಗಳನ್ನು ಕೊಟ್ಟಳು. ಮಹಾತಳವಾರಿ ಅಡವಿ ಶಾಂತಿಶ್ರೀ ಮತ್ತು ಪೂಕಿಯ ಮನೆತನದ ಮಹಾತಳವಾರ, ಮಹಾಸೇನಾಪತಿ ವಾಸಿಷ್ಠೀಪುತ್ರ ಮಹಾಸ್ಕಂದಶ್ರೀಯ ಪತ್ನಿ, ಮಹಾಸೇನ ಪತಿನಿ ಚೂಲಶಾಂತಿ ಶ್ರೀಣೀಕಾ, ಮಹಾದೇವಿ ಛಾಠಿಶ್ರೀ ಮುಂತಾದವರು ತಮ್ಮ ಮತ್ತು ತಮ್ಮ ಮನೆತನದವರ ಶ್ರೇಯಸ್ಸಿಗಾಗಿ ಮಹಾಚೈತ್ಯದ ಪ್ರಾಂಗಣದಲ್ಲಿ ಸ್ತಂಭಗಳನ್ನು ಸ್ಥಾಪಿಸಿದ್ದರು. ಬಹುಶ್ರುತೀಯ ಪಂಥದ ಭಿಕ್ಷುಗಳಿಗಾಗಿ ಮಹಾದೇವಿ ಭಟ್ಟಿದೇವಿ ಒಂದು ವಿಹಾರವನ್ನು ನಿರ್ಮಿಸಿದ್ದಳೂ. ಮಹಾದೇವಿ ಕೊಡಬಲಿ ಶ್ರೀ ಮಹಾಪಂಡಿತ ಧರ್ಮಘೋಷನ ಮುಖಾಂತರ ಮಹೀಶಾಸಕ ಪಂಥದ ಆಚಾರ್ಯರಿಗಾಗಿ ಮತ್ತೊಂದು ವಿಹಾರವನ್ನು ಕಟ್ಟಿಸಿಕೊಂಡಿದ್ದಳು.
ನಾಗಾರ್ಜುನ ಕೊಂಡದ ಬೌದ್ಧ ದಾನಿಗಳಲ್ಲಿ ಬಹುಶಃ ಅತ್ಯಂತ ಗಮನಾರ್ಹ ವ್ಯಕ್ತಿ ಗೋವಗಾಮದ ಬುಧಿಂಣಕನ ಪತ್ನಿಯೂ ರಾಜ್ಯಕೋಶಾಧ್ಯಕ್ಷನ ಸೋದರಪುತ್ರಿಯೂ ಆದ ಉಪಾಸಿಕೆ ಬೋಧಿಶ್ರೀ. ಅಜಂತದ ಬೌದ್ಧಾಚಾರ್ಯರ ಮತ್ತು ಸಿಂಹಳದ ಭಿಕ್ಷುಗಳ ಸೌಕರ್ಯಕ್ಕಾಗಿ ಹಾಗೂ ಕಾಶ್ಮೀರ, ಗಾಂಧಾರ, ಚೀನ, ಕಿರಾತ, ಕೋಸಲ, ಅಪರಾಂತವಂಗ, ವನವಾಸಿ, ಯವನ, ದಮಿಳ ಮತ್ತು ಪಲೂರ ದೇಶಗಳಿಂದ ಬರುತ್ತಿದ್ದ ಭಿಕ್ಷುಗಳ ಉಪಯೋಗಕ್ಕಾಗಿ ಚೂಲ ಧಮ್ಮಗಿರಿಯ ವಿಹಾರದಲ್ಲಿ ಸಕಲ ಆವಶ್ಯಕತೆಗಳನ್ನು ಹೊಂದಿದ್ದ ಅಲಂಕಾರಪೂರ್ಣವಾದ ಸ್ತೂಪ ಮತ್ತು ಚೈತ್ಯಾಗಾರಗಳನ್ನು ತನ್ನ ಮತ್ತು ತನ್ನ ಬಂಧುವರ್ಗದ ಶ್ರೇಯಸ್ಸಿಗಾಗಿ ನಿರ್ಮಿಸಿದ್ದಳು. ಮತ್ತೆ ಕುಳಹ ವಿಹಾರದಲ್ಲಿ ಒಂದು ಚೈತ್ಯಾಗಾರ, ಸಿಂಹಳ ವಿಹಾರದಲ್ಲಿದ್ದ ಬೋಧಿವೃಕ್ಷಕ್ಕೆ ಮಂದಿರ, ಮಹಾಧರ್ಮಗಿರಿಯಲ್ಲಿ (ಮಹಾ ಚೈತ್ಯ) ಒಂದು ಕೋಣೆ ಮತ್ತು ಒಂದು ಅದಕ್ಕೆ ಸೇರಿದ ವಿಹಾರದಲ್ಲಿ ಒಂದು ಸ್ತಂಭ, ದೇವಗಿರಿಯಲ್ಲಿ ಒಂದು ವಿಶಾಲ ಧ್ಯಾನಮಂದಿರ, ಪೂರ್ವಶೈಲದಲ್ಲಿ ಒಂದು ಕೊಳ, ಮೊಗಸಾಲೆ ಮತ್ತು ಮಂಟಪ, ಕಂಟಕಶೈಲದಲ್ಲಿ ಕಲ್ಲಿನ ಮಂಟಪ, ಹಿರಹಿಮುತುವ ಎಂಬಲ್ಲಿ ಮೂರು ಮತ್ತು ಪಪಿಲಾ ಎಂಬಲ್ಲಿ ಏಳು ಕೋಣೆಗಳು, ಪುಷ್ಪಗಿರಿಯಲ್ಲಿ ಒಂದು ಕಲ್ಲಿನ ಮಂಟಪ, ಚಂಡಮುಖ, ಧರ್ಮನಂದಿ ಮತ್ತು ನಾಗ ಎಂಬ ಭಿಕ್ಷುಗಳ ಮಾರ್ಗದರ್ಶನದಲ್ಲಿ ವಿಧಿಕನೆಂಬ ಶಿಲ್ಪಿ ನಿರ್ಮಿಸಿದ ವಿಹಾರಗಳು- ಇವು ಆಕೆಯ ಧಾರ್ಮಿಕ ಕಾರ್ಯಗಳಲ್ಲಿ ಕೆಲವು ಎಂದು ಶಾಸನಗಳು ತಿಳಿಸುತ್ತವೆ. ಈ ಎಲ್ಲ ದಾನಧರ್ಮ ಪ್ರೋತ್ಸಾಹಗಳಿಂದಾಗಿ ನಾಗಾರ್ಜುನ ಕೊಂಡ ಅತ್ಯಂತ ಪ್ರಸಿದ್ಧ ಬೌದ್ಧ ಧಾರ್ಮಿಕ ಕೇಂದ್ರವಾಗಿದ್ದು ಚೀನದಿಂದ ಸಿಂಹಳದವರೆಗಿನ ಹಲವಾರು ದೇಶಗಳಿಂದ ಬೌದ್ಧಯಾತ್ರಿಕರನ್ನೂ ಬೌದ್ಧಧರ್ಮ ವಿದ್ಯಾತುರರನ್ನೂ ಆಕರ್ಷಿಸಿತ್ತು. ಅದೇ ರೀತಿ ಅನೇಕ ಚೈತ್ಯ ವಿಹಾರಗಳನ್ನು ಕಟ್ಟಿಸಿದ ಮತ್ತೊಬ್ಬ ಉಪಾಸಿಕೆ ಚಂದ್ರಶ್ರೀ. ಆಕೆ ವಿಜಯಪುರಿಯಲ್ಲಿ ಬೌದ್ಧಧರ್ಮ ಸಮಾರಂಭಗಳನ್ನೂ ಮತೀಯ ಕ್ರಿಯಾವಿಧಿಗಳನ್ನು ಏರ್ಪಡಿಸುತ್ತಿದ್ದಳೆಂದು ಶಾಸನಗಳು ತಿಳಿಸುತ್ತವೆ. ಆಕೆ ಅಪರಮಹಾವಿನಸೆಲಿಯ ಪಂಥದ ಆಚಾರ್ಯರಿಗೆ ಮತ್ತು ಭಿಕ್ಷುಗಳಿಗೆ ಹಲವಾರು ಬಗೆಯಲ್ಲಿ ನೆರವು ನೀಡಿದ್ದಳು.

ಇಲ್ಲಿ ನೆಲಸಿದ್ದ ಹಲವು ಬೌದ್ಧಪಂಥಗಳ ಬಗ್ಗೆ ಶಾಸನಗಳಲ್ಲಿ ಮಾಹಿತಿಗಳು ಸಿಕ್ಕುತ್ತವೆ. ಥೇರವಾದ, ವಿಭಾಜವಾದ, ಮಹಾಸಾಂಘಿಕ, ಮಹೀಶಾಸನಕ, ಬಹುಶೃತೀಯ, ಲೋಕೋತ್ತರವಾದ, ಮಹಾವಿಹಾರವಾಸಿ, ಅಪರಮಹಾವಿನಸೆಲಿಯ ಇವು ಅಂಥ ಪಂಥಗಳಲ್ಲಿ ಗಮನಾರ್ಹವಾದವು. ಇಲ್ಲಿ ನಡೆದ ಉತ್ಖನನಗಳಲ್ಲಿ ಈ ವಿವಿಧ ಪಂಥಗಳಿಗೆ ಸೇರಿದ ಸ್ತೂಪ, ಸ್ತೂಪ-ಚೈತ್ಯ, ಬುದ್ಧ-ಚೈತ್ಯಗಳೂ ಮೂರು ಅಥವಾ ನಾಲ್ಕು ಪಾಶ್ರ್ವಗಳಲ್ಲೂ ಕೋಣೆಗಳೂ ಮಧ್ಯದಲ್ಲಿ ಕಂಬಗಳಿಂದ ಕೂಡಿದ ಮಂಟಪಗಳೂ ಉಳ್ಳ ವಿಹಾರಗಳು ಕಂಡುಬಂದಿವೆ. ಆಯಾ ಪಂಥಗಳಿಗೆ ಸಂಬಂಧಿಸಿದ ಹೆಸರುಗಳನ್ನೂ ಅನೇಕ ವಿಹಾರಗಳಿಗೆ ಕೊಡಲಾಗಿತ್ತು; ಅಥವಾ, ಸಿಂಹಳದ ಭಿಕ್ಷುಗಳು ವಾಸಿಸುತ್ತಿದ್ದ ವಿಹಾರಕ್ಕೆ ಸಿಂಹಳವಿಹಾರವೆಂದು ಹೆಸರಿದ್ದಂತೆ, ಇಲ್ಲಿ ವಾಸಿಸುತ್ತಿದ್ದ ಭಿಕ್ಷುಗಳ ಮೂಲಸ್ಥಾನದ ಆದೇಶವಿರುತ್ತಿತ್ತು. ಕಾಲಕ್ರಮದಲ್ಲಿ ವಿವಿಧ ಪಂಥಗಳು ಪರಸ್ಪರ ಪ್ರಭಾವಗಳಿಗೆ ಒಳಗಾಗಿ, ಅವುಗಳ ಆಚಾರ ವಿಚಾರ ಸಂಪ್ರದಾಯಗಳಲ್ಲಿ ಸಂಕೀರ್ಣತೆ ಉಂಟಾಯಿತೆಂದು ಇಲ್ಲಿ ಸಿಕ್ಕಿರುವ ಅವಶೇಷಗಳಿಂದ ತಿಳಿದುಬರುತ್ತದೆ. ಈ ಬೌದ್ಧ ಧರ್ಮೀಯ ಅವಶೇಷಗಳಲ್ಲದೆ, ವೈದಿಕ ಧರ್ಮದ ಅನುಯಾಯಿಗಳಾದ ಇಕ್ಷ್ವಾಕು ದೊರೆಗಳು ಕಟ್ಟಿಸಿದ ಸರ್ವದೇವ, ಪುಷ್ಯಭದ್ರ, ಕಾರ್ತಿಕೇಯ, ಶಿವ, ಅಷ್ಟಭುಜಸ್ವಾಮಿ ಮುಂತಾದ ವೈದಿಕ ದೇವತೆಗಳ ಮಂದಿರಗಳ ಅವಶೇಷಗಳೂ ಅರಮನೆ, ಕ್ರೀಡಾಂಗಣ, ರಂಗಮಂದಿರ, ಅಶ್ವಮೇಧಾದಿ ವೈದಿಕ ಯಜ್ಞಗಳ ವೇದಿಕೆಗಳು, ಅವಭೃಥಸ್ನಾನ ಕೊಳ ಮೊದಲಾದವುಗಳ ಉಳಿಕೆಗಳೂ ಕಾಣಬಂದಿವೆ.

ವಾಸ್ತುಶಿಲ್ಪ : ಎ.ಎಚ್. ಲಾಂಗ್‍ಹಸ್ರ್ಟ್ 1927-31ರಲ್ಲಿ. ಟಿ.ಎನ್. ರಾಮಚಂದ್ರನ್ 1939ರಲ್ಲಿ ಮತ್ತು ಆರ್. ಸುಬ್ರಹ್ಮಣ್ಯಂ 1954-60ರಲ್ಲಿ ನಡೆಸಿದ ಪ್ರಾಕ್ತನಸಂಶೋಧನೆಗಳಿಂದ 60ಕ್ಕೂ ಹೆಚ್ಚಿನ ಬೌದ್ಧಸ್ತೂಪ, ಚೈತ್ಯಾಗಾರ ಮತ್ತು ವಿಹಾರಸಮುದಾಯಗಳೂ ಹಿಂದೂ ದೇವಾಲಯ ಹಾಗೂ ಇತರ ಕಟ್ಟಡಗಳೂ ಅಸಂಖ್ಯಾತ ಶಿಲ್ಪಗಳೂ ನಾಣ್ಯಗಳೂ ಶಾಸನಗಳೂ ಬೆಳಕಿಗೆ ಬಂದಿವೆ. ಅವು ನಾಗಾರ್ಜುನ ಕೊಂಡ ಕಣಿವೆಯಲ್ಲಿ ಕ್ರಿಸ್ತಶಕದ ಮೊದಲ ಶತಮಾನಗಳಲ್ಲಿ ಬೆಳೆದುಬಂದ ಸಂಸ್ಕøತಿಯ ಹಲಮುಖಗಳ ಪರಿಚಯ ಮಾಡಿಕೊಡುತ್ತವೆ. ಈ ಕಟ್ಟಡಗಳನ್ನು 50.80 ಸೆಂ.ಮೀ. 25.40 ಸೆಂ.ಮೀ.  7.62 ಸೆಂ.ಮೀ. ಗಾತ್ರದ ಸುಟ್ಟ ಇಟ್ಟಿಗೆಗಳಿಂದ ಕಟ್ಟಲಾಗಿದೆ. ಅಂಥ ಇಟ್ಟಿಗೆಗಳೂ ಆ ಕಾಲದಲ್ಲಿ ಬಳಕೆಯಲ್ಲಿದ್ದುದಕ್ಕೆ ಭಾರತದ ಹಲವಾರು ಪ್ರದೇಶಗಳಲ್ಲಿ ನಡೆಸಿರುವ ಉತ್ಖನನಗಳು ಸಾಕ್ಷಿಯನ್ನೊದಗಿಸುತ್ತವೆ. ಇಟ್ಟಿಗೆಯ ಗೋಡೆಗಳಿಗೆ ಸುಣ್ಣದ ಗಾರೆಯನ್ನು ಬಳಸಿರುವುದಲ್ಲದೆ ಗೋಡೆಗಳ ಮೇಲೆ ವಿವಿಧ ಅಲಂಕಾರಗಳನ್ನು ಗಾರೆಗಚ್ಚುಗಳಿಂದ ಮಾಡಲಾಗಿದೆ. ಕೆಲವು ಬಾರಿ ಬಣ್ಣಗಳನ್ನು ಬಳಿದಿರುವುದುಂಟು. ಮೇಲಂತಸ್ತಿನಿಂದ ಗೋಡೆಗಳ ಮುಖಾಂತರ ನೀರು ಹರಿದು ಹೋಗಲು ಕೊಳವೆ ಮಾರ್ಗಗಳನ್ನು ನಿರ್ಮಿಸಲಾಗಿದೆ. ಅಸ್ತಿಭಾರ, ಕಂಬಗಳು, ನೆಲಗಟ್ಟು ಮತ್ತು ಶಿಲ್ಪಗಳಿಗೆ ಬಿಳಿ ಅಥವಾ ಬೂದುಬಣ್ಣದ ಸುಣ್ಣಕಲ್ಲಿನ ಚಪ್ಪಡಿ ಅಥವಾ ದಿಮ್ಮಿಗಳನ್ನು ಬಳಸಲಾಗಿದೆ. ನಾಗಾರ್ಜುನ ಕೊಂಡದ ಸ್ತೂಪಗಳು ಉತ್ತರ ಭಾರತದ ಸ್ತೂಪಗಳಂತೆ ಆದ್ಯಂತ ಗಟ್ಟಿಯಾದವಲ್ಲ. ಅವುಗಳ ತಳವಿನ್ಯಾಸ ಚಕ್ರಾಕಾರವಾಗಿದ್ದು, ಮಧ್ಯಭಾಗದಲ್ಲಿ ಕೆಲವು ತೆರಪುಗಳಿರುತ್ತಿದ್ದುವು. ಮಧ್ಯನಾಭಿಯಿಂದ ಇಟ್ಟಿಗೆಯಲ್ಲಿ ಕಟ್ಟಿಸಿದ ಅರೆಗೋಡೆಗಳು ಕೆಲವು ವೃತ್ತಗಳನ್ನು ಹಾಯ್ದು ಹೊರವೃತ್ತವನ್ನು ಸೇರುತ್ತಿದ್ದುವು. ಮಧ್ಯದ ತೆರಪುಗಳನ್ನು ಮಣ್ಣಿನಿಂದ ತುಂಬಿಸಲಾಗುತ್ತಿತ್ತು. ಬೌದ್ಧರ ಧರ್ಮಚಕ್ರದ ಸಂಕೇತವಾದ ಈ ವೃತ್ತಾಕಾರದ ವೇದಿಕೆಯನ್ನು ನಿರ್ಮಿಸಿ, ಇದರ ಮೇಲೆ ಸುತ್ತಲೂ ಪ್ರದಕ್ಷಿಣಾಪಥವನ್ನುಳಿಸಿ, ಮಧ್ಯಭಾಗದಲ್ಲಿ ಅಂಡ ಅಥವಾ ಗುಂಡುದಿಮ್ಮಿಯನ್ನೂ (ಡ್ರಮ್) ಅದರ ಮೇಲೆ ಗೋಲಾಕಾರದ ಗುಮ್ಮಟವನ್ನೂ (ಡೋಮ್) ಕಟ್ಟಲಾಗುತ್ತಿತ್ತು. ನಾಗಾರ್ಜುನ ಕೊಂಡದ ಹೆಚ್ಚಿನ ಸ್ತೂಪಗಳಲ್ಲಿ ವೇದಿಕೆಯ ನಾಲ್ಕು ದಿಕ್ಕುಗಳಲ್ಲೂ ಆಯಕ ಪೀಠಗಳನ್ನೂ ಅವುಗಳ ಮೇಲೆ ಆಯಕಸ್ತಂಭಗಳನ್ನೂ ಕಟ್ಟಲಾಗಿದೆ. ವಿವಿಧ ಪ್ರಮಾಣಗಳ ಇಂಥ ಹಲವಾರು ಸ್ತೂಪಗಳು ಅಲ್ಲಿ ಕಂಡುಬಂದಿವೆ. ಗುಮ್ಮಟದ ಮೇಲೆ ಕಟಕಟೆಯಲ್ಲಿ ಹರ್ಮಿಕಾ, ಅದರ ಮೇಲೆ ಛತ್ರಾವಳಿ ಇರುತ್ತಿದ್ದವು. ನಾಗಾರ್ಜುನ ಕೊಂಡದ ಆಯಕಪೀಠಗಳಿಂದ ಹಲವಾರು ಉತ್ತಮ ಶಿಲ್ಪಗಳು ಸಿಕ್ಕಿವೆ. ಅಲ್ಲಿರುವ ಸ್ತೂಪಗಳನ್ನು ರಚನಾ ವಿಧಾನದ ಆಧಾರದ ಮೇಲೆ ಎರಡು ರೀತಿಯದಾಗಿ ವಿಂಗಡಿಸಬಹುದು. ಇಟ್ಟಿಗೆ ಮತ್ತು ಸುಣ್ಣದಿಂದ ಕಟ್ಟಿದ, ಶಿಲ್ಪಾಲಂಕರವಿಲ್ಲದ ಸಾಧಾರಣ ಸ್ತೂಪಗಳು, ವೇದಿಕೆಯಿಂದ ಹಿಡಿದು ಗುಮ್ಮಟದವರೆಗೂ ಹಸನಾದ ಸುಣ್ಣಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳಿಂದ ಅಲಂಕೃತವಾದ ಸ್ತೂಪಗಳು. ಈ ಶಿಲ್ಪಗಳನ್ನು ಕಲ್ಲಿನಲ್ಲಾಗಲಿ, ಗಚ್ಚಿನಲ್ಲಾಗಲಿ ಮಾಡಲಾಗುತ್ತಿತ್ತು. ಈ ಶಿಲ್ಪಗಳು ಗಾಂಧಾರ ಶಿಲ್ಪಶೈಲಿಯಿಂದ ಬಹುಮಟ್ಟಿಗೆ ಪ್ರಭಾವಿತವಾಗಿವೆ.

ಇಲ್ಲಿಯ ಸ್ತೂಪಗಳಲ್ಲಿ ಪ್ರಮುಖವಾದ ಮಹಾಚೈತ್ಯಸ್ತೂಪ ಚಕ್ರಾಕಾರವಾಗಿದೆ. ಎಲೆಗಳ ಆಕೃತಿಯಲ್ಲಿ ನಿರ್ಮಿಸಿದ ಅರೆಗೋಡೆಗಳಿಂದ ತ್ರಿಕೋನಾಕಾರದ ಎಂಟು ಸಣ್ಣ ಕೋಣೆಗಳು ಏರ್ಪಟ್ಟಿವೆ. ಅವುಗಳ ಪೈಕಿ ಉತ್ತರದ ಕೋಣೆಯಲ್ಲಿ ಬುದ್ಧನ ದೇಹಾವಶೇಷಗಳನ್ನು ಒಂದು ಪುಟ್ಟ ಚಿನ್ನದ ಡಬ್ಬಿಯಲ್ಲಿಡಲಾಗಿತ್ತು. ಆ ಚಿನ್ನದ ಡಬ್ಬಿಯನ್ನು ಸ್ತೂಪಾಕಾರದ ಬೆಳ್ಳಿಯ ಕರಂಡದಲ್ಲಿಡಲಾಗಿತ್ತು. ಅಲ್ಲದೆ ಹವಳ, ಮುತ್ತು, ಪಚ್ಚೆಯ ಮಣಿಗಳೂ ಸಣ್ಣ ನಾಣ್ಯಗಳೂ ಚಿನ್ನದ ಮುದ್ರಿಕೆಗಳೂ ಬೆಳ್ಳಿಯ ಕರಂಡದಲ್ಲಿದ್ದವು.

ನಾಗಾರ್ಜುನ ಕೊಂಡದಲ್ಲಿ ನೂರಾರು ಶಿಲ್ಪಗಳು ದೊರಕಿವೆ. ಸುಂದರ ಕೆತ್ತನೆಗಳುಳ್ಳ ಕಲ್ಲಿನ ಕಂಬಗಳು, ಅಡ್ಡತೊಲೆಗಳು, ಉಬ್ಬುಶಿಲ್ಪಗಳು ಮತ್ತು ಶಿಲ್ಪಫಲಕಗಳು ಬುದ್ಧನ ಜೀವಿತ, ಜಾತಕ ಕಥೆಗಳು ಮತ್ತು ಇತರ ಸಾಮಾಜಿಕ ಚಿತ್ರಗಳನ್ನು ರೂಪಿಸುತ್ತವೆ. ಸಾಮಾನ್ಯವಾಗಿ ಜಾತಕ ಕಥೆಗಳ ಹಲವು ಘಟನೆಗಳನ್ನು ಶಿಲ್ಪಿ ಒಂದೇ ಫಲಕದಲ್ಲಿ ರೂಪಿಸಿದ್ದಾನೆ. ಈ ಶಿಲ್ಪಗಳ ವಸ್ತುಗಳನ್ನು ಹಲವು ಪ್ರಾಚೀನ ಬೌದ್ಧ ಧಾರ್ಮಿಕ ಗ್ರಂಥಗಳಿಂದಲೂ ಚೀನ ಮತ್ತು ಸಿಂಹಳ ದೇಶಗಳಲ್ಲಿ ರೂಢಿಯಲ್ಲಿದ್ದ ಐತಿಹ್ಯಗಳಿಂದಲೂ ಆಯ್ದುಕೊಳ್ಳಲಾಗಿದೆ.

1938ರಲ್ಲಿ ನಡೆಸಿದ ಉತ್ಖನನಗಳಲ್ಲಿ ಸಿಕ್ಕಿದ ವಿಹಾರ ಸಮುದಾಯ ಗಮನಾರ್ಹ. ಒಂದು ಸ್ತೂಪ, ಎರಡು ಚೈತ್ಯಾಗಾರಗಳು, ಮಧ್ಯಭಾಗದಲ್ಲಿ ಕಂಬಗಳಿಂದ ಕೂಡಿದ ಮಂಟಪ, ಅದರ ಸುತ್ತಲೂ ಕೋಣೆಗಳಿರುವ ಒಂದು ಸಂಘಾರಾಮ ಇವು ಆ ಸಮುದಾಯದಲ್ಲಿವೆ. ಅದರ ಉತ್ತರಕ್ಕೆ ಒಂದು ಸಣ್ಣ ಕೋಣೆಯೂ ಒಂದು ಕಾರ್ಯಾಗಾರವೂ ಹೊರವಲಯ ವೃತ್ತಾಕಾರವಾಗಿ ಮತ್ತು ಒಳಭಾಗ ಚತುರಸ್ರವಾಗಿ ಇರುವ ಒಂದು ಕಟ್ಟಡವೂ ಇದೆ. ಇವೆಲ್ಲವೂ ಸೇರಿ ಆದ ಆ ಸಮುದಾಯವನ್ನು ಸ್ವಸಂಪೂರ್ಣವಾದ ಒಂದು ವಿಭಾಗವೆಂದು ಪರಿಗಣಿಸಬಹುದು. ಆಯಕ ವೇದಿಕೆಯಿಂದ ಕೂಡಿದ ಆ ಸ್ತೂಪದ ವ್ಯಾಸ 12.42 ಮೀ. ಅದರ ಹೊರಭಾಗವನ್ನು ಶಿಲ್ಪಮಯ ಫಲಕಗಳಿಂದ ಮುಚ್ಚಿದಂತೆ ಕಾಣುತ್ತದೆ. ಅದರ ಪೂರ್ವಭಾಗದಲ್ಲಿ ಪರಸ್ಪರ ಅಭಿಮುಖವಾಗಿದ್ದ ಎರಡು ಗಜಪೃಷ್ಠಾಕೃತಿಯ ಚೈತ್ಯಾಗಾರಗಳಿದ್ದುವು. ದಕ್ಷಿಣದ ಚೈತ್ಯಾಗಾರದಲ್ಲಿ ನಿತ್ಯಪೂಜೆಗೆಂದು ನಿರ್ಮಿಸಿದ್ದ ಸಣ್ಣ ಸ್ತೂಪವಿತ್ತು. ಪದ್ಮಪೀಠದ ಮೇಲೆ ನಿಂತ ಬುದ್ಧನ ಎರಡು ಪಾದಗಳ ನಡುವೆ ಚಿಕ್ಕ ರಂಧ್ರವಿತ್ತು. ಅದನ್ನು ಒಂದು ಕಲ್ಲಿನ ಫಲಕದಿಂದ ಮುಚ್ಚಲಾಗಿತ್ತು. ಆ ಮುಚ್ಚಳವನ್ನು ತೆಗೆದು ನೋಡಿದಾಗ 1.27 ಸೆಂ.ಮೀ. ವ್ಯಾಸ ಮತ್ತು 4.45 ಸೆಂ.ಮೀ. ಆಳದ ಆ ರಂಧ್ರದಲ್ಲಿ ಒಂದು ಚಿನ್ನದ ಸಂಪುಟದಲ್ಲಿ 95 ಮುತ್ತುಗಳು ಮತ್ತು ಅಸ್ಥಿ ಭಸ್ಮಗಳಿದ್ದವು. ವಿಗ್ರಹಪ್ರತಿಷ್ಠೆಯ ಕಾಲದಲ್ಲಿ ಧಾರ್ಮಿಕ ವಿಧಿಗೆ ಅನುಗುಣವಾಗಿ ಅವನ್ನು ಅಲ್ಲಿ ಸ್ಥಾಪಿಸಿದ್ದಿರಬಹುದು.

ಚೈತ್ಯಾಗಾರಗಳ ಪೂರ್ವಕ್ಕೆ ಸಂಘಾರಾಮವಿತ್ತು. 31ಮೀ.(22.5ಮೀ ವಿಸ್ತೀರ್ಣದ ಅದರ ಮೂರು ಪಾಶ್ರ್ವಗಳಲ್ಲೂ 2.7ಮೀ.(2.1 ಮೀ. ವಿಸ್ತೀರ್ಣದ ಕೋಣೆಗಳಿದ್ದವು. ಪ್ರಾಂಗಣದ ನಡುವೆ ಕಂಬಗಳಿಂದೊಡಗೂಡಿದ ಮಂಟಪವಿತ್ತು. ಆಗ್ನೇಯ ಮೂಲೆಯಲ್ಲಿದ್ದ ಕೋಣೆಯಲ್ಲಿ ಮೂತ್ರಗೃಹವಿತ್ತು. ಮೂತ್ರಿಯಿಂದ ಕೊಳಕು ನೀರನ್ನು ಕೊಳವೆಗಳ ಮೂಲಕ ಸುಮಾರು ಆರು ಮೀಟರ್ ದೂರದಲ್ಲಿ ಭೂಮಿಯೊಳಗೆ ಅಗೆದಿದ್ದ ಊರುಗುಂಡಿಗೆ ಒಯ್ಯುವ ಏರ್ಪಾಟು ಮಾಡಲಾಗಿತ್ತು. 3 ಮೀ. ಉದ್ದ 2.4 ಮೀ. ಅಗಲ ಮತ್ತು 1.8ಮೀ ಆಳವಿದ್ದ ಆ ಗುಂಡಿಯಲ್ಲಿ ಜಲ್ಲಿಕಲ್ಲು, ಉಂಡೆಕಲ್ಲು, ಮರಳು ಮತ್ತು ಸುಣ್ಣವನ್ನು ಪದರಪದರವಾಗಿ ಹರಡಲಾಗಿತ್ತು. ಉತ್ತರ ಭಾಗದಲ್ಲಿದ್ದ ಕೋಣೆಗಳಿಗೆ ಹೆಚ್ಚು ಪ್ರಾಮುಖ್ಯವಿದ್ದಂತೆ ಕಾಣುತ್ತದೆ, ಅವುಗಳಲ್ಲಿ ಪಶ್ಚಿಮದಿಂದ ಮೊದಲ ಕೋಣೆಯಲ್ಲಿ ನೆಲೆದ ಮೇಲೆ ಕಲ್ಲಿನಲ್ಲಿ ಕೆತ್ತಿದ 38 ಸೆಂ.ಮೀ. ಎತ್ತರ, ನಡುಭಾಗದಲ್ಲಿ 26.6 ಸೆಂ.ಮೀ. ಮತ್ತು ಬಾಯಿ ಬಳಿ 10.16 ಸೆಂ.ಮೀ. ವ್ಯಾಸಗಳಿದ್ದ, ಹೊರಮೈಯಲ್ಲಿ ಅನೇಕ ಅಲಂಕಾರಗಳಿದ್ದ ಒಂದು ಪೂರ್ಣವನ್ನು ಇಡಲಾಗಿತ್ತು. ಕುಂಭದ ಬಾಯನ್ನು 16.5 ಸೆಂ.ಮೀ. ವ್ಯಾಸದ ಎರಡು ಪದ್ಮಗಳ ಕೆತ್ತನೆಯಿದ್ದ ಫಲಕದಿಂದ ಮುಚ್ಚಲಾಗಿತ್ತು. ಆ ಮುಚ್ಚಳದ ಮೇಲೆ ಚಿತ್ರಾವಳಿಯಿತ್ತು. ಕುಂಭದಲ್ಲಿ 2 ಮಾನವ ಹಲ್ಲುಗಳಿದ್ದವು. ಈ ದಂತಾವಶೇಷಗಳು ನಾಗಾರ್ಜುನ ಕೊಂಡದಲ್ಲಿ ಕ್ರಿಸ್ತಶಕ ಮೊದಲ ಭಾಗದಲ್ಲಿ ಜೀವಿಸಿದ್ದ ಪ್ರಸಿದ್ದ ಬೌದ್ಧ ಪಂಡಿತ ನಾಗಾರ್ಜುನಾಚಾರ್ಯನವೆಂದು ಐತಿಹ್ಯವಿದೆ.

ಸಂಘಾರಾಮದಲ್ಲಿ ಚೈತ್ಯಾಗಾರಗಳ ನಡುವೆ ಅನೇಕ ಗಚ್ಚಿನ ಶಿಲ್ಪಗಳು ಸಿಕ್ಕಿವೆ. ಅವುಗಳಲ್ಲಿ ಹಲವು ರೀತಿಯ ಪುಷ್ಪಗಳ ಮತ್ತು ಪ್ರಾಣಿಗಳ ಚಿತ್ರಣಗಳಿವೆ. ಈ ಮೊದಲು ಉಲ್ಲೇಖಿಸಿದ ಕಾರ್ಯಾಗಾರ 3.9 ಮೀ. ಅಗಲವಿತ್ತು. ಅದರ ಉದ್ದವನ್ನು ಪೂರ್ಣವಾಗಿ ಶೋಧಿಸಲಿಲ್ಲ. ಅದರಲ್ಲಿ 61 ಪೂರ್ಣಗೊಳಿಸಿದ ಮತ್ತು 48 ಅಪೂರ್ಣವಾದ ಶಿಲ್ಪಗಳು ಕಂಡುಬಂದಿರುವುದರಿಂದ ಅದನ್ನು ಶಿಲ್ಪಿಗಳ ಕಾರ್ಯಾಗಾರವೆಂದು ಗುರುತಿಸಲಾಗಿದೆ. ಅಲ್ಲಿ ಸಿಕ್ಕಿದ ಅಪೂರ್ಣ ಶಿಲ್ಪ ಫಲಕವೊಂದರಲ್ಲಿ ಚಾವಣಿಯ ಸೂರನ್ನು ಎಡಗೈಯಲ್ಲಿ ಹಿಡಿದು, ಬಲಗೈಯನ್ನು ಸೊಂಟದ ಮೇಲೂರಿಕೊಂಡು ತ್ರಿಭಂಗಿಯಲ್ಲಿ ನಿಂತ ಸುಂದರ ಸ್ತ್ರಿಯೊಬ್ಬಳ (ಸಾಲಭಂಜಿಕೆ) ರೇಖಾಚಿತ್ರವನ್ನು ಬಿಡಿಸಲಾಗಿದೆ. ಅವಳ ಎಡಪಕ್ಕದಲ್ಲಿ ಒಬ್ಬ ಸೇವಿಕೆ ಎರಡೂ ಕೈಯಲ್ಲಿ ತಿಲಕದ ಭರಣಿಯನ್ನು ಹಿಡಿದು ನಿಂತಿದ್ದಾಳೆ. ಸೇವಿಕೆಯ ಹಿಂಭಾಗದಲ್ಲಿರುವ ಕಂಬದಿಂದ ಆಧಾರಿತವಾದ ಚಾವಣಿಯ ಭಾಗದ ಫಲಕದ ಮೇಲೆ ಸಿಂಹದಂತಿರುವ ಪ್ರಾಣಿಯನ್ನು ಹೂಡಿರುವ ರಥದಲ್ಲಿ ಧನುರ್ಧಾರಿ ಸವಾರನ ಚಿತ್ರವನ್ನು ತೋರಿಸಲಾಗಿದೆ. ಅಲ್ಲಿಯ ಶಿಲ್ಪಿಗಳು ಉಬ್ಬುಶಿಲ್ಪಗಳನ್ನು ನಿರ್ಮಿಸಲು ಫಲಕಗಳ ಮೇಲೆ ಮೊದಲು ರೇಖಾಚಿತ್ರಗಳನ್ನು ಬಿಡಿಸಿ, ಅನಂತರ ಅವನ್ನು ಅನುಸರಿಸಿ ಕೆತ್ತನೆ ಮಾಡುತ್ತಿದ್ದರೆಂಬ ಅಂಶವನ್ನು ಈ ರೇಖಾಚಿತ್ರ ಸ್ಪಷ್ಟಗೊಳಿಸುತ್ತದೆ. 

1954-60ರ ನಡುವಣ ಉತ್ಖನನಗಳಲ್ಲಿ ಒಟ್ಟು 28 ವಿಹಾರಗಳು, 10 ಸ್ತೂಪಗಳು, ಬೌದ್ಧ ಸ್ತ್ರೀದೇವತೆಗಳಲ್ಲೊಬ್ಬಳಾದ ಹಾರೀತಿಯ ಮಂದಿರ, ಕಂದಕ-ಗೋಡೆಗಳಿಂದ ಪರಿವೃತವಾದ ವಿಜಯಪುರಿ ಪರದೇಶ, ಅದರೊಳಗೆ ಅಶ್ವಮೇಧ ಯಾಗವೇದಿಕೆಗಳು, ಅರಮನೆಯಿಂದ ನದೀತೀರಕ್ಕೆ ಹೋಗುವ ಸೋಪಾನಗಳು ಮತ್ತು ಸ್ನಾನಘಟ್ಟ, ಸಾರ್ವಜನಿಕ ಕಾರ್ಯಗಳಿಗೆ ಉಪಯೋಗಿಸುತ್ತಿದ್ದ ರಂಗಮಂದಿರ, ಪುಷ್ಪಭದ್ರಸ್ವಾಮಿ, ಸರ್ವದೇವಸ್ವಾಮಿ, ಕಾರ್ತೀಕೇಯಸ್ವಾಮಿ ಮತ್ತು ನವಗ್ರಹ ದೇವತೆಗಳ ಮಂದಿರ - ಇವೆಲ್ಲವುಗಳ ಅವಶೇಷಗಳನ್ನು ಕಂಡುಹಿಡಿಯಲಾಗಿದೆ. ಆ ದೇವಾಲಯಗಳು ಪ್ರಾಚೀನ ವಾಸ್ತುಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಹೇಳಲಾದ ಧಾರ್ಮಿಕ ವಿಧಿಗಳಿಗೆ ಅನುಸಾರವಾಗಿ ರಚಿತವಾಗಿವೆ. ದೇವಾಲಯಗಳಲ್ಲಿ ಅಂತರಾಳ ಮುಖಮಂಟಪಗಳನ್ನೂ ಧ್ವಜಸ್ತಂಭಗಳನ್ನೂ ಕಾಣಬಹುದು. ತಳವಿನ್ಯಾಸ ಸಾಮಾನ್ಯವಾಗಿ ಗಜಪೃಷ್ಠಾಕೃತಿಯದಾಗಿರುತ್ತದೆ. ಹಿಂದೂ ದೇವಾಲಯಗಳು ಗಜಪೃಷ್ಠಾಕೃತಿಯಲ್ಲಿರುವುದು ಗಮನಾರ್ಹ. ಅಂಥ ತಲವಿನ್ಯಾಸ ಆ ಕಾಲದಲ್ಲಿ ಕೇವಲ ಬೌದ್ಧ ಚೈತ್ಯಗಳಿಗೆ ಸೀಮಿತವಾಗಿರಲಿಲ್ಲವೆಂಬುದು ದೃಢಪಡುತ್ತದೆ. ಮತ್ತೊಂದು ಗಮನಾರ್ಹ ಅಂಶವೆಂದರೆ, ಕೋಟೆಯೊಳಗಿದ್ದ ಸುರಕ್ಷಿತ ಸ್ಥಳಗಳಲ್ಲಿ, ನದೀತೀರದಲ್ಲಿ ಕೂಡ, ಹಿಂದೂ ಧಾರ್ಮಿಕ ನಿರ್ಮಾಣಗಳು ಪ್ರಧಾನವಾಗಿರುವುದು. ಅದರಿಂದ ಇಲ್ಲಿಯ ದೊರೆಗಳೂ ವೈದಿಕಧರ್ಮಾನುಯಾಯಿಗಳಾಗಿದ್ದರೆಂಬುದು ಸ್ಪಷ್ಟಪಡುತ್ತದೆ. ಆದರೆ ಇಲ್ಲಿ ಕಂಡುಬರುವ ಕೆಲವು ಶಾಸನಗಳಿಂದ ಇಕ್ಷ್ವಾಕು ವಂಶದ ಆಳ್ವಿಕೆಗೆ ಮೊದಲು ಈ ಪ್ರದೇಶದಲ್ಲಿ ಹಲವಾರು ಕಟ್ಟಡಗಳೂ ಶಾಸನಗಳೂ ಇದ್ದುವೆಂಬುದು ತಿಳಿದುಬರುತ್ತದೆ. ಆ ಶಾಸನಗಳ ಲಿಪಿಯ ಆಧಾರದ ಮೇಲೆ ಅವನ್ನು ಶಾತವಾಹನರ (ಕ್ರಿ.ಶ. 1-2ನೆಯ ಶತಮಾನ) ಕಾಲಕ್ಕೆ ನಿರ್ದೇಶಿಸಬಹುದು. ಇಲ್ಲಿ ಒಂದು ಛಾಯಾಸ್ತಂಭದ (ಸ್ಮಾರಕಸ್ತಂಭ) ಮೇಲೆ ಶಾಸನವೊಂದಿದೆ. ಶಾತವಾಹನರ ಕಾಲದಲ್ಲಿ ಇಲ್ಲಿ ನಡೆದ ಯುದ್ಧದಲ್ಲಿ ಕುಲಹಕ ಕುಲದ ಶಾಂತಮೂಲ ಅಸು ನೀಗಿದನೆಂದೂ ಶಾಸನವುಳ್ಳ ಆ ಸ್ಮಾರಕಸ್ತಂಭವನ್ನು ಇದೇ ಸ್ಥಳದಲ್ಲಿ ನೆಡಲಾಯಿತೆಂದೂ ಆ ಶಾಸನ ತಿಳಿಸುತ್ತದೆ.

ವಿಜಯಪುರಿಯಲ್ಲಿರುವ ಸಾರ್ವಜನಿಕ ರಂಗಮಂಟಪ ಕುತೂಹಲಕಾರಿಯಾದುದು. ಇಲ್ಲಿ ನಡೆಯುತ್ತಿದ್ದ ನಾಟ್ಯ-ನೃತ್ಯಗಳನ್ನು ನೋಡಲು ಬಂದ ಪ್ರೇಕ್ಷಕವರ್ಗವೂ ಧರ್ಮಪ್ರವಚನ ಅಥವಾ ಸಾರ್ವಜನಿಕ ಭಾಷಣಗಳನ್ನು ಕೇಳಲು ಬಂದ ಶ್ರೋತೃವರ್ಗವೂ ಕೂಡಲು ನಾಲ್ಕೂ ಕಡೆಗಳಲ್ಲಿ ಮೆಟ್ಟಿಲು ಆಸನಗಳನ್ನು (ಗ್ಯಾಲರಿ) ನಿರ್ಮಿಸಲಾಗಿದೆ. ಅರೆತೆರೆದ ಆ ರಂಗಮಂಟಪದ ಉದ್ದ 17.15 ಮೀ., ಅಗಲ 14.40 ಮೀ. ಗ್ಯಾಲರಿಯ ಆಸನಗಳನ್ನು ಪರಿಸರದಲ್ಲಿ ಸಿಕ್ಕುವ ಕಡಪಾ ಕಲ್ಲು ಚಪ್ಪಡಿಗಳಿಂದ ನಿರ್ಮಿಸಲಾಗಿದೆ. ಅದರ ನೈಋತ್ಯ ಮೂಲೆಯಲ್ಲಿ ಎತ್ತರವಾದ ಕಲ್ಲಿನ ವೇದಿಕೆ (ಪ್ರಮುಖರಿಗಾಗಿ ಇರಬಹುದು) ನಿರ್ಮಿತವಾಗಿದೆ. ಅರೆತೆರೆದ ರಂಗಮಂಟಪದಲ್ಲಿ ಸುರಿದ ಮಳೆನೀರನ್ನು ಹೊರಗೊಯ್ಯಲು ನೈಋತ್ಯ ಮೂಲೆಯಲ್ಲಿ ಒಂದು ಕೊಳವೆ ಚರಂಡಿಯಿದೆ. ಪ್ರಾಂಗಣದ ಮಧ್ಯದಲ್ಲಿ ಎತ್ತರವಾದ ದುಂಡುವೇದಿಕೆ ಇದೆ. ಗಾಯಕರು, ನಟರು, ಭಾಷಣಕಾರರು ಅದರ ಮೇಲೆ ನಿಂತು ಹಾಡುತ್ತಿದ್ದರು, ಅಭಿನಯಿಸುತ್ತಿದ್ದರು, ಭಾಷಣಮಾಡುತ್ತಿದ್ದರು ಎಂದು ಊಹಿಸಬಹುದು. ಆ ವೇದಿಕೆಯ ಮುಖಗಳ ಮೇಲೆ ಒಂದೆಡೆ ತ್ರಿರತ್ನಸಂಕೇತ, ಇನ್ನೊಂದೆಡೆ ಬಿಲ್ಲುಬಾಣಗಳ ಸಂಕೇತ, ಮತ್ತೊಂದೆಡೆ ಕಾಮಶರ ಮತ್ತು ಧನಕಸ ಆಸನ ಎಂಬ ಶಾಸನಗಳು ಇವೆ. ಆ ರಂಗಮಂಟಪದ ನಿರ್ಮಾಣದಲ್ಲಿ ಗಮನಿಸಬೇಕಾದ ಅಂಶವೆಂದರೆ, ವೇದಿಕೆಯ ಸುತ್ತಲ ಸುಮಾರು 61 ಮೀ. ವರೆಗೆ ಧ್ವನಿ ಸ್ಪಷ್ಟವಾಗಿ ಕೇಳಿಬರುವುದಲ್ಲದೆ, ಹಂತಹಂತವಾಗಿ ಮೇಲೆ ಮತ್ತು ವೇದಿಕೆಯಿಂದ ದೂರವಾದ ಮೇಲಿನ ಗ್ಯಾಲರಿಯಲ್ಲಿ ಕುಳಿತವರಿಗೂ ಧ್ವನಿ ಚೆನ್ನಾಗಿ ಕೇಳಿಬರುವಂತೆ ಅದರ ವಾಸ್ತು ಸಂಯೋಜನೆಯಾಗಿದೆ. ರಂಗಮಂಟಪದ ಎದುರಿಗೆ ಇರುವ ಗುಡ್ಡದ ಮೇಲೆ ಹಾರೀತಿ ಗುಡಿಯಿದೆ.

ನದೀತೀರದಲ್ಲಿ ಎಲ್ಲ ಕಡೆಗಳಲ್ಲಿಯೂ ಮೆಟ್ಟಿಲುಗಳಿರುವ, ಇಟ್ಟಿಗೆಗಳಿಂದ ನಿರ್ಮಿಸಲಾದ ಕ್ರೀಡಾಂಗಣ (ಅರೀನ) ಇಲ್ಲಿಯ ಇನ್ನೊಂದು ಗಮನಾರ್ಹ ಕಟ್ಟಡ. ಅದರ ವಿಸ್ತೀರ್ಣ 105.5 ಮೀ.ಘಿ 104.2 ಮೀ. ಪಶ್ಚಿಮ ಭಾಗದ ಮೆಟ್ಟಿಲುಗಳ ಮಧ್ಯಭಾಗದಲ್ಲಿ ಎತ್ತರವಾದ ಮಂಟಪದಂಥ ವೇದಿಕೆಯಿದೆ. ಬಹುಶಃ ರಾಜಪರಿವಾರದವರು ಮತ್ತು ಇತರ ಪ್ರತಿಷ್ಠಿತ ವ್ಯಕ್ತಿಗಳು ಅಲ್ಲಿ ಕುಳಿತು ಕ್ರೀಡಾವಿನೋದಗಳನ್ನು ನೋಡಲು ಅದನ್ನು ನಿರ್ಮಿಸಿದ್ದಿರಬಹುದು. ಅದರ ಬಳಿ ಕಾರ್ತಿಕೇಯನ ದೇವಿಯದಿರಬಹುದಾದ ತಲೆಯಿಲ್ಲದ ಮುಂಡವೊಂದು ಸಿಕ್ಕಿದೆ.

ಅದರ ದಕ್ಷಿಣಕ್ಕೆ 182.9 ಮೀ. ದೂರದಲ್ಲಿ ಕಲ್ಲಿನ ಕಂಬಗಳಿಂದ ಕೂಡಿದ ಮುಖ ಮಂಟಪ ಮತ್ತು ಇಟ್ಟಿಗೆ ಗೋಡೆಗಳಿಂದ ನಿರ್ಮಿಸಲಾದ ಮೂರು ಭಾಗಗಳುಳ್ಳ ಗಜಪೃಷ್ಠಾಕಾರದ ದೇವಾಲಯ ಇದೆ. ಅದರ ಕಂಬಗಳ ಮೇಲಿರುವ ಶಾಸನಗಳಿಂದಲೂ ಅಲ್ಲಿಂದ 0.4 ಕಿ.ಮೀ. ದೂರದಲ್ಲಿರುವ ಮಂಟಪ ಮತ್ತು ಅದರ ಅನೇಕ ಶಿಲ್ಪಗಳಿಂದಲೂ ಅವುಗಳನ್ನು ಇಕ್ಷ್ವಾಕು ದೊರೆಗಳ ಕಾಲಕ್ಕೆ ನಿರ್ದೇಶಿಸಲಾಗಿದೆ. ಆ ವಿಗ್ರಹಗಳಲ್ಲಿ ಕಾರ್ತಿಕೇಯ ಮೂರ್ತಿಗಳು ಹೆಚ್ಚಾಗಿರುವುದು, ಆಗ ಕಾರ್ತಿಕೇಯ ಆರಾಧನೆ ಪ್ರಬಲವಾಗಿದ್ದುದನ್ನು ತಿಳಿಸುತ್ತದೆ. ಬಹುಶಃ ಚಾಳುಕ್ಯರ ಮೂಲಸ್ಥಾನ ವಿಜಯಪುರಿಯಾಗಿತ್ತೆಂದು ಅಲ್ಲಿರುವ ಶಾಸನಗಳಿಂದ ಊಹಿಸಲಾಗಿದೆ. ಕೋಟೆಯ ಮಧ್ಯಭಾಗದಲ್ಲಿ ಧರ್ಮಸಂಬಂಧವಾದ ಹಲವು ನಿರ್ಮಾಣಗಳಿವೆ. ಅವುಗಳಲ್ಲಿ ಮುಖ್ಯವಾದ್ದು ಅಶ್ವಮೇಧಯಾಗಶಾಲೆ. ಆ ಗುಂಪಿನಲ್ಲಿ ಕೂರ್ಮಾಕೃತಿಯ ಹೋಮಕುಂಡ, ಆಹವನೀಯಾಗ್ನಿಶಾಲೆ, ಅವಭೃಥಸ್ನಾನಘಟ್ಟ, ಸ್ನಾನಘಟ್ಟದಿಂದ ಹೊರಡುವ ಕಾಲುವೆಗಳೂ, ಉಪಸಂವೇಶಶಾಲೆ ಮತ್ತು ಯಾಗ ಸಾಮಗ್ರಿಗಳನ್ನು ಇಡುವ ಕೋಣೆಗಳು ಇದ್ದುವು. ಆ ಕಟ್ಟಡಗಳು ಎರಡು ಪ್ರತ್ಯೇಕ ಸ್ತರಗಳಲ್ಲಿರುವುದರಿಂದ, ಎರಡುಬಾರಿ ಅಶ್ವಮೇಧಯಾಗ ಮಾಡಲು ಇವನ್ನು ಉಪಯೋಗಿಸಿರಬಹುದೆಂದು ಊಹಿಸಲಾಗಿದೆ. ಅವಭೃಥಸ್ನಾನಘಟ್ಟ ಒಳ್ಳೆಯ ಈಜುಕೊಳದಂತಿದೆ. 8.2 ಮೀ. ಚದರದ ಆ ಕೊಳದ ಆಳ 1.8 ಮೀ. ಅದರ ನಾಲ್ಕು ಪಾಶ್ರ್ವಗಳಲ್ಲೂ ಮೆಟ್ಟಿಲುಗಳಿವೆ. ಇಬ್ಬದಿಗಳಲ್ಲೂ ವಿಶಾಲವಾದ ವೇದಿಕೆಗಳು ಅವುಗಳಿಂದ ಇಳಿಯಲು ಮೆಟ್ಟಿಲುಗಳೂ ಇವೆ. ಕೊಳದ ವಾಯವ್ಯ ಮೂಲೆಯಲ್ಲಿ ಸ್ವಲ್ಪ ಎತ್ತರದಲ್ಲಿ ಕೊಳವೆ ಮಾರ್ಗವಿದ್ದು, ಅದರವರೆಗೆ ನೀರನ್ನು ತುಂಬಿರಲಾಗುತ್ತಿತ್ತು. ಬಳಿಯಲ್ಲಿ ಯಾಗದ ಕುದುರೆಯನ್ನು ಹೂತಿರುವ ಸ್ಥಳವಿದೆ. ಕುದುರೆಯ ಅಸ್ಥಿಪಂಜರದೊಂದಿಗೆ ಇತರ ಕೆಲವು ಪ್ರಾಣಿಗಳ ಮೂಳೆಗಳೂ ದೊರಕಿವೆಯಾದ್ದರಿಂದ ಕುದುರೆಯೊಂದಿಗೆ ಇನ್ನಿತರ ಪ್ರಾಣಿಗಳನ್ನು ಬಲಿಕೊಡುತ್ತಿದ್ದಿರಬಹುದೆಂದು ಊಹಿಸಲಾಗಿದೆ.

ಇದಲ್ಲದೆ ಉತ್ಖನನಗಳಲ್ಲಿ ಸಿಕ್ಕಿದ ಸಾವಿರಾರು ಶಿಲ್ಪಗಳು, ನಾಣ್ಯಗಳೂ, ಶಾಸನಗಳು ಮತ್ತು ಇತರ ನಿತ್ಯೋಪಯೋಗಿ ವಸ್ತುಗಳಿಂದ ಆಗಿನ ಸಾಮಾಜಿಕ-ಧಾರ್ಮಿಕ ಜೀವನ ರೀತಿನೀತಿಗಳು ಆಗಿನವರ ಉಡುಗೆ-ತೊಡುಗೆ, ದೇಹಾಲಂಕಾರ ಸಾಮಗ್ರಿಗಳು, ಕೇಶಾಲಂಕಾರ, ಗೃಹೋಪಕರಣಗಳೂ, ಪೀಠೋಪಕರಣಗಳು ಸಂಗೀತವಾದ್ಯಗಳು, ಆಯುಧಸಾಮಗ್ರಿಗಳು, ವಾಹನವ್ಯವಸ್ಥೆ, ಆಟಿಕೆಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಗಳು ದೊರಕುತ್ತವೆ.

ನಾಗಾರ್ಜುನ ಕೊಂಡ ದಕ್ಷಿಣ ಭಾರತದ ಇತಿಹಾಸದಲ್ಲಿ, ಅದರಲ್ಲೂ ಪ್ರಾಚೀನ ಇತಿಹಾಸಯುಗದಲ್ಲಿ ಅತ್ಯಂತ ಪ್ರಮುಖವಾದ ಒಂದು ಮೈಲಿಗಲ್ಲು.									
	  (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ